ಕೇರಳ & ಕರ್ನಾಟಕ PSC ಸ್ಪರ್ಧಾ ಮಿತ್ರ, ಕಾಸರಗೋಡು

Full width home advertisement

Post Page Advertisement [Top]

 ಆತ್ಮೀಯ ಉದ್ಯೋಗಾರ್ಥಿ ಮಿತ್ರರೇ,

        ರಾಜ್ಯ ಸರಕಾರದ ವಿವಿಧ ಇಲಾಖೆಗಳಿಗೆ ಉದ್ಯೋಗಿಗಳನ್ನು ಆಯ್ಕೆ ಮಾಡಲು ರಚನೆಗೊಂಡ ಸಾಂವಿಧಾನಿಕ ಸಂಸ್ಥೆಯು "ಲೋಕಸೇವಾ ಆಯೋಗ" ಎಂಬುದು ನಿಮಗೆ ತಿಳಿದಿರಬಹುದು. ಕೇರಳದ ಎಲ್ಲಾ ಸರಕಾರಿ ನೇಮಕಾತಿ ಪ್ರಕ್ರಿಯೆಯು ಕೇರಳ ಲೋಕಸೇವಾ ಆಯೋಗ (Kerala PSC) ಮೂಲಕ ನಡೆಯುತ್ತದೆ. ಇದೇ ರೀತಿ ಕರ್ನಾಟಕದಲ್ಲಿ ಕರ್ನಾಟಕ ಲೋಕಸೇವಾ ಆಯೋಗ (Karnataka PSC) ಹಾಗೂ ಕೇಂದ್ರ ಸರಕಾರದಲ್ಲಿ ಉದ್ಯೋಗಾರ್ಥಿಗಳನ್ನು ಆಯ್ಕೆ ಮಾಡಲು ಕೇಂದ್ರ ಲೋಕಸೇವಾ ಆಯೋಗ (UPSC) ರಚಿತವಾಗಿದೆ‌‌. ಕಾಸರಗೋಡಿನ ಕನ್ನಡಿಗರ ಮುಂದೆ ಸರಕಾರಿ ಉದ್ಯೋಗ ಪಡೆಯುವ ಎಷ್ಟೋ ಆಯ್ಕೆಗಳಿವೆ. ಆದರೆ ಮಾಹಿತಿಯ ಕೊರೆತೆ, ಸಂಪನ್ಮೂಲಗಳ ಕೊರತೆಗಳು ನಮ್ಮ ಅವಕಾಶನ್ನು ಮನೆಯಂಗಳಕ್ಕೆ ಸೀಮಿತವಾಗಿರಿಸಿದೆ. ಕರ್ನಾಟಕಕ್ಕೆ ಹೋಲಿಸಿದಾಗ ಕೇರಳ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಸ್ಪರ್ಧಾರ್ಥಿಗಳ ತೀವ್ರ ಪೈಪೋಟಿ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಿಕೆಯನ್ನು ಕಾಣಬಹುದು. ಎಷ್ಟರ ಮಟ್ಟಿಗೆ ತೀವ್ರ ಪೈಪೋಟಿ ಇದೆಯೆಂದರೆ ಕಾಸರಗೋಡಿನ ಬೆರಳೆಣಿಕೆಯ ಕನ್ನಡ ಹುದ್ದೆಗಳಿಗೂ ಕನ್ನಡಿಗರಿಗಿಂತ ಜಾಸ್ತಿ ಕನ್ನಡೇತರ ಅಭ್ಯರ್ಥಿಗಳನ್ನು ಕಾಣಬಹುದು. ಸಾಕಷ್ಟು ಸಂದರ್ಭಗಳಲ್ಲಿ ಕನ್ನಡ ಹುದ್ದೆಗಳಿಗೆ ಕನ್ನಡಬಾರದವರೂ ಆಯ್ಕೆ ಆಗಿರುವ ನಿದರ್ಶನಗಳು ಇವೆ. ಇದಕ್ಕೆ ಹಲವು ಕಾರಣಗಳು ಇದೆ. ಸದಾ ಲೋಕಸೇವಾ ಆಯೋಗದ ತಪ್ಪುಗಳನ್ನು ಎತ್ತಿಹಿಡಿಯುವುದಕ್ಕಿಂತ ನಮ್ಮ ವೈಫಲ್ಯಕ್ಕೆ ಕಾರಣಗಳನ್ನು ಕಂಡುಹಿಡಿಯಲು ಪ್ರಯತ್ನಿಸಬೇಡವೇ...

        ಸಾಧಿಸುವ ಛಲ ಇದ್ದರೆ ಯಾವ ವಿದ್ಯೆಯಾದರೂ ಒಲಿಯಲೇಬೇಕು. ಅದಕ್ಕೆ ಸಂಶಯವೇ ಇಲ್ಲ. ಲೋಕಸೇವಾ ಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಕಷ್ಟು ಪೂರ್ವ ತಯಾರಿಯೊಂದಿಗೆ ಭಾಗವಹಿಸಬೇಕು. ಹಾಗಿದ್ದರೆ ಮಾತ್ರ ಸರಕಾರಿ ಉದ್ಯೋಗ ಎಂಬ ಕನಸು ನನಸಾದಿತು. ಒಂದರ್ಥದಲ್ಲಿ ಪಿ.ಎಸ್.ಸಿ ಪರೀಕ್ಷೆಗೆ ತಯಾರಿ ನಡೆಸುವುದು ಎಂದರೆ ಅದೊಂದು Ph.D ಅಧ್ಯಯನದಂತೆ ಎಂದರೂ ತಪ್ಪಿಲ್ಲ ಅನಿಸುತ್ತದೆ. ಹಾಗೆಂದ ಮಾತ್ರಕ್ಕೆ ಪಿ.ಎಸ್.ಸಿ ಪರೀಕ್ಷೆಗೆ ತಯಾರಿ ನಡೆಸುವುದು ಸಾಮಾನ್ಯರಿಗೆ ಅಸಾಧ್ಯ ಅಥವಾ ಕಷ್ಟ ಎಂಬ ಅರ್ಥೈಸಬಾರದು. ಪ್ರತಿ ಪಿ.ಎಸ್.ಸಿ ಪರೀಕ್ಷೆಗೆ ಅರ್ಜಿ ಆಹ್ವಾನಿಸುವ ಸಂದರ್ಭದಲ್ಲಿ ಆ ಹುದ್ದೆಗೆ ಅಗತ್ಯವಾದ ಶೈಕ್ಷಣಿಕ ಯೋಗ್ಯತೆಯನ್ನು ಸ್ಪಷ್ಟವಾಗಿ ಹೇಳುತ್ತಾರೆ. ಇಲ್ಲಿ ಶೈಕ್ಷಣಿಕ ಯೋಗ್ಯತೆಗಳು ಕೇವಲ ಪರೀಕ್ಷೆ ಬರೆಯಲು ಅಥವಾ ನೇಮಕಾತಿಗೆ ಇರುವ ಅರ್ಹತೆ ಮಾತ್ರವಾಗಿದೆ. ಅಂದರೆ, ನಿಮ್ಮ ಹಿಂದಿನ ಶೈಕ್ಷಣಿಕ ಅಂಕಗಳು ಇಲ್ಲಿ ಪ್ರಯೋಜಕ್ಕೆ ಬರುವುದಿಲ್ಲ. ಪ್ರತಿ ಪಿ.ಎಸ್.ಸಿ ಪರೀಕ್ಷೆಗೂ ಲೋಕಸೇವಾ ಆಯೋಗ ನಿರ್ದಿಷ್ಟಪಡಿಸಿದ ಪಠ್ಯಕ್ರಮ (Syllabus) ಇರುತ್ತದೆ. ಸಾಮಾನ್ಯವಾಗಿ ಮೂಲಭೂತ ಶೈಕ್ಷಣಿಕ ಯೋಗ್ಯತೆ ಹತ್ತನೇ ತರಗತಿ ಆಗಿರುವ ಎಲ್ಲಾ ಪಿ.ಎಸ್.ಸಿ ಪರೀಕ್ಷೆಗಳಿಗೆಲ್ಲಾ ಒಂದು ನಿರ್ದಿಷ್ಟ ಪಠ್ಯಕ್ರಮ ಮಾತ್ರ ಇರುತ್ತದೆ.

                ಕೇರಳದಲ್ಲಿ PSC ಪರೀಕ್ಷೆ ಬರೆಯಲು ಮಲೆಯಾಳಂ ಗೊತ್ತಿರಬೇಕಾ...? ಇದು ಸಾಮಾನ್ಯವಾಗಿ ಎಲ್ಲರ ಪ್ರಶ್ನೆ. ಕೆಲವು ಮಲೆಯಾಳಂ ಆಧಾರಿತ ಪರೀಕ್ಷೆಗಳನ್ನು ಬರೆಯಲು ಮಲೆಯಾಳಂ ಭಾಷೆಯಲ್ಲಿ ಉತ್ತಮವಾದ ಬರವಣಿಯ ಹಿಡಿತ ಅಗತ್ಯ ಎಂಬುದು ಸತ್ಯ. ಆದರೆ ಬಹುಪಾಲು ಪರೀಕ್ಷೆಗಳಲ್ಲಿ ಮಲೆಯಾಳಂ ಜ್ಞಾನ ಅಗತ್ಯ ಇರುದಿಲ್ಲ. ಆದರೆ‌ ಸಾಮಾನ್ಯ ಜ್ಞಾನ ಪ್ರಶ್ನೆಗಳಲ್ಲಿ ಮಲೆಯಾಳಂ ಸಾಹಿತ್ಯದಿಂದ ಕೆಲವು ಪ್ರಶ್ನೆಗಳನ್ನು ನಿರೀಕ್ಷಿಸಬಹುದು. ಮಲೆಯಾಳಂ ಓದಲು ಗೊತ್ತಿದ್ದರೆ ಅದು ಕೇರಳ ಪಿ.ಎಸ್‌.ಸಿ ಪರೀಕ್ಷೆಯ ಪೂರ್ವ ತಯಾರಿಗೆ ತುಂಬಾ ಸಹಾಯವಾಗುತ್ತದೆ. ಕನ್ನಡ ಅಧ್ಯಾಪಕ, ಉಪನ್ಯಾಸಕ, ಗ್ರಂಥಪಾಲಕ, ಎಲ್.ಡಿ ಕ್ಲರ್ಕ್ ಹುದ್ದೆಗಳ ಪ್ರಶ್ನೆ ಪತ್ರಿಕೆಯು ಸಾಮಾನ್ಯವಾಗಿ ಕನ್ನಡದಲ್ಲೂ ಕಂಡುಬರುತ್ತದೆ. ಇವುಗಳಲ್ಲದೆ ಇನ್ನೂ ಹಲವು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಕನ್ನಡಲ್ಲಿಯೂ ಲಭ್ಯವಿದೆ. ಎಲ್ಲಾ ಕೇರಳ ಪಿ.ಎಸ್.ಸಿ ಪರಿಕ್ಷೆಗಳ ಪ್ರಕಟಣೆಗಳು ಕಾಲಕಾಲಕ್ಕೆ ಆಯೋಗದ ಅಧಿಕೃತ ಜಾಲತಾಣ "ತುಳಸಿ" (ಕೇರಳ ಪಿ.ಎಸ್.ಸಿ) ಯ ಮೂಲಕ ಲಭ್ಯವಾಗುತ್ತದೆ. ಸೂಕ್ತ ಪರೀಕ್ಷೆಗಳ ಸೂಚನೆಯನ್ನು ನಾವು ನಮ್ಮ ಈ ಬ್ಲಾಗ್ ಮೂಲಕ ಹಂಚಿಕೊಳ್ಳಲು ಪ್ರಯತ್ನಿಸುತ್ತೇವೆ. ಕೇರಳ ಪಿ.ಎಸ್.ಸಿ ಪರೀಕ್ಷೆಗಳಿಗೆ ಕನ್ನಡ ಅಭ್ಯರ್ಥಿಗಳನ್ನು ಉಚಿತವಾಗಿ ಸಜ್ಜುಗೊಳಿಸುವುದು ನಮ್ಮ ಗುರಿ. ಆದರೆ ಇದರಲ್ಲಿ ನಾವು ಎಷ್ಟರಮಟ್ಟಿಗೆ ಯಶಸ್ಸನ್ನು ಪಡೆಯುತ್ತೇವೆ ಅಥವಾ ನಮ್ಮ ಪ್ರಯತ್ನ ಎಷ್ಟು ಕಾಲ ಮುಂದುವರಿಯಬಹುದು ಎಂಬುದು ಗೊತ್ತಿಲ್ಲ. ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರ ಹಾಗೂ ಪ್ರಾರ್ಥನೆಯನ್ನು ಸದಾಕಾಲ ಬೇಡುತ್ತೇವೆ.

*** ವಿಶೇಷ ಸೂಚನೆ : ನಮ್ಮ ಈ ಬ್ಲಾಗ್ ಯಾವುದೇ ಸಂಘ-ಸಂಸ್ಥೆಯ ಅಥವಾ ಸರಕಾರದ ಭಾಗವಲ್ಲ. ಇದೊಂದು ಸ್ವತಂತ್ರ ಬ್ಲಾಗ್ ಆಗಿದೆ.

ಕೇರಳ ಪಿ.ಎಸ್.ಸಿ ಪರೀಕ್ಷೆಗೆ ಸಿದ್ಧರಾಗುವ ಅಭ್ಯರ್ಥಿಗಳಿಗೆ ಸಹಕಾರಿಯಾಗುವ ಲೇಖನ, ಡಿಜಿಟಲ್ ಸಂಪನ್ಮೂಲಗಳನ್ನು ನಮ್ಮೊಂದಿಗೆ ಹಂಚಿಕೊಂಡರೆ, ಗುಣಮಟ್ಟವನ್ನು ಖಾತರಿಪಡಿಸಿಕೊಂಡು ನಾವು ಅದನ್ನು ನಿಮ್ಮ ಸಂಪಾದಕತ್ವದ ಹೆಸರಿನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಲಭ್ಯವಾಗುವಂತೆ ಪ್ರಕಟಿಸುತ್ತೇವೆ.

ನಮ್ಮ ಮೈಲ್ ಐಡಿ : kannadakasaragod@gmail.com

ಬನ್ನಿ...

ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಭಾಗವಹಿಸೋಣ...

ಗೆಲುವು ಸಾಧಿಸೋಣ...

" ಕೆಲವೊಮ್ಮೆ ನೀವು ಉದ್ಯೋಗವನ್ನು ಪಡೆಯುತ್ತೀರಿ, ಇಲ್ಲವೇ ಜ್ಞಾನವನ್ನು ಪಡೆಯುತ್ತೀರಿ "







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Bottom Ad [Post Page]